ರಾಜ್ಯ ಚುನಾವಣಾ ಆಯೋಗ, ಕರ್ನಾಟಕ

ರಾಜ್ಯ ಚುನಾವಣಾ ಆಯೋಗ, ಕರ್ನಾಟಕ
ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ.

ರಾಜ್ಯ ಚುನಾವಣಾ ಆಯೋಗವು ಒಂದು ಸಾಂವಿಧಾನಿಕ ಸಂಸ್ಥೆಯಾಗಿದ್ದು, ಭಾರತ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳನ್ವಯ ರಾಜ್ಯದಲ್ಲಿನ ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸುವ ಸಲುವಾಗಿ ದಿನಾಂಕ: 26-05-1993 ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ರಾಜ್ಯ ಚುನಾವಣಾ ಆಯೋಗವನ್ನು ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಚಿಸಲಾಗಿದೆ.

ಭಾರತ ಸಂವಿಧಾನದ ಅನುಷ್ಛೇದ 243 (ಕೆ) ಹಾಗೂ 243 (ಜೆಡ್‍ಎ) ರಡಿಯಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಿರುವ ಅಧಿಕಾರ ಮತ್ತು ಕಾರ್ಯಗಳು ಭಾರತ ಚುನಾವಣಾ ಆಯೋಗಕ್ಕೆ ಅನುಚ್ಛೇದ 324 ರಡಿಯಲ್ಲಿ ನಿಹಿತವಾಗಿರುವಂತೆ ಅವರವರ ಕಾರ್ಯ ಕ್ಷೇತ್ರದಲ್ಲಿ ಒಂದೇ ರೀತಿಯಿರುತ್ತದೆ.

ರಾಜ್ಯ ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದು, ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗಳನ್ನು ಮತ್ತು ನಾಲ್ಕು ಹಂತದ ನಗರ ಸ್ಥಳೀಯ ಸಂಸ್ಥೆ ಅಂದರೆ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆಯನ್ನು ನಡೆಸುತ್ತದೆ.

ರಾಜ್ಯ ಚುನಾವಣಾ ಆಯೋಗವು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020, ಕರ್ನಾಟಕ ಪೌರಸಭೆಗಳ ಅಧಿನಿಯಮ 1964 ಮತ್ತು ಕರ್ನಾಟಕ ಪೌರ ನಿಗಮಗಳ ಅಧಿನಿಯಮ 1976 ರ ಅಡಿಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ರಾಜ್ಯ ಚುನಾವಣಾ ಆಯೋಗದ ಅಧೀಕ್ಷಣೆ, ನಿರ್ದೇಶನ ಮತ್ತು ನಿಯಂತ್ರಣದಲ್ಲಿ ನಡೆಸಲು ಅಧಿಕಾರವನ್ನು ನೀಡಲಾಗಿದೆ. ರಾಜ್ಯ ಚುನಾವಣಾ ಆಯೋಗಕ್ಕೆ ಕರ್ನಾಟಕ ಸ್ಥಳೀಯ ಪ್ರಾಧಿಕಾರಗಳ (ಪಕ್ಷಾಂತರ ನಿಷೇದ) ಅಧಿನಿಯಮ 1987 ರನ್ವಯ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಸದಸ್ಯರ ಮೇಲೆ ಸಲ್ಲಿಸಿದ ದೂರುಗಳನ್ನು ವಿಚಾರಣೆ ನಡೆಸಿ, ಸೂಕ್ತವೆನಿಸಿದಲ್ಲಿ ರಾಜಕೀಯ ಪಕ್ಷಗಳ ಸದಸ್ಯರುಗಳನ್ನು ಸದಸ್ಯತ್ವದಿಂದ ಅನರ್ಹಗೊಳಿಸಿ ಆದೇಶಗಳನ್ನು ಹೊರಡಿಸಬಹುದಾಗಿರುತ್ತದೆ. ನಗರ ಸ್ಥಳೀಯ ಸಂಸ್ಥೆಗಳ /ಗ್ರಾಮೀಣ ಸ್ಥಳೀಯ ಸಂಸ್ಥೆಗಳ(ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿ) ಚುನಾವಣೆಯಲ್ಲಿ ಸ್ವರ್ಧಿಸುವ ಅಭ್ಯರ್ಥಿಗಳು ಅವರ ವೆಚ್ಚ ವಿವರ ಸಲ್ಲಿಸದಿದ್ದಲ್ಲಿ / ಸಲ್ಲಿಸಲು ವಿಳಂಬವಾದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅನರ್ಹಗೊಳಿಸುವ ಅಧಿಕಾರವನ್ನು ಕೊಡಲಾಗಿದೆ. ಮುಂದುವರೆದು ಜಿಲ್ಲಾ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿಯ ಸದಸ್ಯರುಗಳು ಅವರ ವಾರ್ಷಿಕ ಆಸ್ತಿ ಮತ್ತು ಹೊಣೆಗಾರಿಕೆ ವಿವರಗಳನ್ನು ಸಲ್ಲಿಸದಿದ್ದಲ್ಲಿ ಅಥವಾ ತಪ್ಪು ವಿವರಗಳನ್ನು ಸಲ್ಲಿಸಿದಲ್ಲಿ, ಅವರನ್ನು ಅನರ್ಹಗೊಳಿಸುವ ಅಧಿಕಾರ ರಾಜ್ಯ ಚುನಾವಣಾ ಆಯೋಗಕ್ಕೆ ನೀಡಲಾಗಿದೆ

ಶ್ರೀಮತಿ ಹೊನ್ನಾಂಬ.ಎಸ್, ಭಾ.ಆ.ಸೇ.,

ಕಾರ್ಯದರ್ಶಿ

ಶ್ರೀ ನಾಗರಾಜು. ಎನ್.ಆರ್, ಕೆ. ಎ. ಎಸ್.,

ಅಧೀನ ಕಾರ್ಯದರ್ಶಿ

ಪ್ರಕಾಶ, ಎಸ್‌, ಮರಬಳ್ಳಿ

ಅಧೀನ ಕಾರ್ಯದರ್ಶಿ

ಸಾಂಸ್ಥಿಕ ಚಾರ್ಟ್